ಕ್ಷೇತ್ರಕಾರ್ಯ (ಸಮಾಜಶಾಸ್ತ್ರದಲ್ಲಿ)

ಕ್ಷೇತ್ರಕಾರ್ಯ ವೈಜ್ಞಾನಿಕವೂ ಉಪಯುಕ್ತವೂ ಪ್ರಾಮಾಣಿಕವೂ ಆಗಬೇಕಾದರೆ ಯಾವ ಯಾವ ವಿಧಾನಗಳನ್ನು ಬಳಸಬೇಕು ಎಂಬ ವಿಷಯವನ್ನು ಕ್ಷೇತ್ರಕಾರ್ಯಎಂಬ ಲೇಖನದಲ್ಲಿ ವಿವರಿಸಿದೆ. ಇಲ್ಲಿ ಸಮಾಜಶಾಸ್ತ್ರಕ್ಕೆ ಸಂಬಂಧಿಸಿದಂತೆ ಅದು ಹೇಗಿರಬೇಕು ಎಂಬ ವಿಷಯವನ್ನು ಮಾತ್ರ ಪ್ರಸ್ತಾಪಿಸಲಾಗುತ್ತದೆ.

ಸಮಾಜಶಾಸ್ತ್ರದ ಕ್ಷೇತ್ರ ಬಹಳ ವಿಶಾಲವಾದುದು. ಈ ಶಾಸ್ತ್ರ ಇಡೀ ಜನತೆಯ ಜೀವನವಿಶ್ಲೇಷಣೆಗೆ ಸಂಬಂಧಪಟ್ಟಿದೆಯಾಗಿ ಇದರ ವ್ಯಾಪ್ತಿಗೆ ಬಾರದ ವಿಷಯವೇ ಇಲ್ಲವೆನ್ನಬಹುದು. ಒಂದು ಭಾಗದ ಜನ ಹಿಂದಿನಿಂದಲೂ ಆರ್ಥಿಕವಾಗಿ ಪ್ರಗತಿ ಹೊಂದಿರಲು ಕಾರಣಗಳೇನು? ಹಳ್ಳಿಗಳಿಂದ ಪಟ್ಟಣಗಳಿಗೆ ವಲಸೆ ಬರುವ ಜನರ ಉದ್ದೇಶಗಳೇನು? ರಾಜಕೀಯದಿಂದ ಜನಜೀವನದ ಮೇಲೆ ಆಗಿರುವ ಪರಿಣಾಮಗಳೇನು? ಕುಟುಂಬ ನಿಯಂತ್ರಣಕ್ಕೂ ವಿದ್ಯಾಮಟ್ಟಕ್ಕೂ ಸಂಬಂಧವಿದೆಯೇ? ಕುಡಿತಕ್ಕೂ ಕೊಲೆ ಸುಲಿಗೆಗಳಿಗೂ ಏನು ಸಂಬಂಧ? ದೈಹಿಕ ದೌರ್ಬಲ್ಯಕ್ಕೂ ಇಂದಿನ ವಿದ್ಯಾಭ್ಯಾಸ ಕ್ರಮಕ್ಕೂ ಏನಾದರೂ ಸಂಬಂಧವಿದೆಯೇ? ಆದಿವಾಸಿಗಳ ಜೀವನದಿಂದ ನಾವು ಕಲಿಯಬಹುದಾದ ಪಾಠಗಳಾವುವು? ವಿದ್ಯಾರ್ಥಿವರ್ಗದ ಮೇಲೆ ಹಶೀಶ್ ಮೊದಲಾದವುಗಳ ಪರಿಣಾಮ ಎಷ್ಟು ಆಗಿದೆ? ವೃತ್ತಿಯಿಂದ ಹಾರುವ ಮನೋಧರ್ಮದ ಹಿನ್ನೆಲೆಯೇನು? ಜನಸಂಖ್ಯೆಯ ಹೆಚ್ಚಳಕ್ಕೂ ಆಹಾರಪದಾರ್ಥಗಳ ತಯಾರಿಕೆಗೂ ಏನಾದರೂ ಸಂಬಂಧವಿದೆಯೇ? ಹೀಗೆ ನೂರಾರು ಸಾಮಾಜಿಕ ಸಮಸ್ಯೆಗಳು ನಮ್ಮೆದುರಿಗೆ ಇವೆ. ಇವಕ್ಕೆ ಅಗತ್ಯವಾದ ಮಾಹಿತಿಗಳು ದೇಶದೇಶಕ್ಕೆ ವ್ಯತ್ಯಾಸವಾಗುತ್ತವೆ. ಅಲ್ಲದೆ ಕಾಲಕಾಲಕ್ಕೆ ಇವುಗಳ ಉತ್ತರಗಳೂ ವ್ಯತ್ಯಾಸವಾಗುತ್ತ ಹೋಗುತ್ತವೆ. ಒಂದೊಂದು ಸಮಸ್ಯೆಯೂ ಹತ್ತಾರು ಪ್ರಭಾವಗಳಿಂದಾಗಿ ಸಂಕೀಣಾವೂ ಜಟಿಲವೂ ಆಗಿರುತ್ತದಾಗಿ ಅದರ ವಿಶ್ಲೇಷಣೆಯಲ್ಲಿ ಸೂಕ್ಷ್ಮಪರಿಶೀಲನೆ ತಾಳ್ಮೆ, ಶುದ್ಧತರ್ಕ, ಸಮಂಜಸ ನಿರ್ಧಾರಗಳು ಅಗತ್ಯವಾಗುತ್ತವೆ.
ಹೀಗಿರುವುದರಿಂದ ಕ್ಷೇತ್ರಕಾರ್ಯ ನಡೆಸಬೇಕೆಂದಿರುವವರು ಮೊದಲು ತಮ್ಮ ಸಮಸ್ಯೆ ಏನೂ, ಅದನ್ನು ಯಾವ ಕಾಲಕ್ಕೆ ಯಾವ ದೇಶಕ್ಕೆ ಮಿತಿಗೊಳಿಸಿಕೊಳ್ಳಬೇಕು. ಅದರ ನಿರ್ವಹಣೆಗೆ ಬೇಕಾಗಬಹುದಾದ ಅನ್ವೇಷಕರ ಸಂಖ್ಯೆ ಎಷ್ಟು, ಅತ್ಯಗತ್ಯವಾದ ಸಲಕರಣೆಗಳೇನು, ಸಿದ್ಧಪಡಿಸಿಕೊಳ್ಳಬೇಕಾದ ಪ್ರಶ್ನಾವಳಿ ಇತ್ಯಾದಿಗಳು ಹೇಗಿರಬೇಕು-ಎಂಬ ಎಲ್ಲ ವಿವರಗಳನ್ನೂ ಪೂರ್ವಭಾವಿಯಾಗಿ ಸಿದ್ಧಪಡಿಸಿಕೊಳ್ಳಬೇಕು.
ಹಿಂದೆ ಥಾಮರ್ಸ ರಾಬರ್ಟ್‍ಮ್ಯಾಲ್ಥಸ್ (1776-1834) ಎಂಬಾತ ಒಂದು ಸಾಮಾಜಿಕ ಸಿದ್ಧಾಂತವನ್ನು ಪ್ರತಿಪಾದಿಸಿದ. ಜನಸಂಖ್ಯೆ ಜ್ಯಾಮಿತೀಯವಾಗಿ ಏರುತ್ತಿದ್ದು ಆಹಾರಪದಾರ್ಥಗಳ ತಯಾರಿಕೆಗೆ ಅಂಕಗಣಿತೀಯವಾಗಿ ಮಾತ್ರ ಮುಂದುವರಿಯುತ್ತಿರುವುದರಿಂದ ಲೋಕದ ಬಡತನವನ್ನು ನಿವಾರಿಸಲಾಗುವುದಿಲ್ಲ ಎನ್ನುವುದು ಆತ ಕಂಡ ಸತ್ಯ. ಅಂದಿಗೂ ಇಂದಿಗೂ ಇದು ಸತ್ಯವಾಗಿ ಉಳಿದಿದೆಯಾದರೂ ವಿಜ್ಞಾನದ ಪ್ರಗತಿಯಿಂದ ಈ ಸತ್ಯವನ್ನು ಸುಳ್ಳಾಗಿಸಲು ಸಾಧ್ಯವೆ ಎಂಬ ಪ್ರಶ್ನೆ ಇವತ್ತಿಗೂ ಇದ್ದೇ ಇದೆ. ಅನೇಕ ಸಾಮಾಜಿಕ ಮೌಲ್ಯಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವಾಗಿ ಅವುಗಳ ಇತಿಮಿತಿಯ ಕಡೆಗೆ ಸಂಶೋಧಕನ ದೃಷ್ಟಿ ಇರಬೇಕಾದುದು ಅತ್ಯಗತ್ಯ ಎಂಬುದನ್ನು ಶ್ರುತಪಡಿಸಲು ಮೇಲಿನದನ್ನು ಉದಾಹರಿಸಲಾಯಿತು.
ಕ್ಷೇತ್ರ ಪರಿಮಿತಿಯ ಪ್ರಶ್ನೆ ಬಂದಾಗ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಕೆಲಸ ಕಾರ್ಯಗಳನ್ನು ಪರಿಶೀಲಿಸಬಹುದು. ಈ ಸಂಸ್ಥೆ ಒಂದೊಂದು ಕೆಲಸಕ್ಕಾಗಿ ಬೆಂಗಳೂರು ನಗರವನ್ನು ಮಾತ್ರ ಆರಿಸಿಕೊಂಡು ಅಲ್ಲಿನ ಒಂದೊಂದು ಮೊಹಲ್ಲವನ್ನೂ ವಿವರವಾಗಿ ಕಂಡು ಅಂಕಿಅಂಶಗಳನ್ನು ಸಂಗ್ರಹಿಸಿ, ಜನರನ್ನು ಸಂದರ್ಶಿಸಿ, ಕೇಳಿ ಸಂಗ್ರಹಿಸಿದ ಮಾಹಿತಿಗಳನ್ನು ವೈಜ್ಷಾನಿಕವಾಗಿ ಪರಿಶೀಲಿಸಿ ತನ್ನ ಅನೇಕ ವರದಿಗಳನ್ನು ಪ್ರಕಟಪಡಿಸಿದೆ. ಸಮಾಜಶಾಸ್ತ್ರದ ದೃಷ್ಟಿಯಿಂದ ಕಾರ್ಯ ಕ್ಷೇತ್ರ ಹೇಗಿರಬೇಕೆಂಬುದಕ್ಕೆ ಈ ಸಂಸ್ಥೆಯ ಕೆಲಸಕಾರ್ಯಗಳು ಮಾದರಿಯಾಗಿವೆ.
ವೈಯಕ್ತಿಕ ಕ್ಷೇತ್ರಪರಿಶೀಲನೆ ಬಹು ಮುಖ್ಯವಾದುದು. ಇಂಗ್ಲೆಂಡ್ ಮತ್ತು ಯೂರೋಪಿನಿಂದ ವಿವಿಧ ಕ್ಷೇತ್ರಗಳಿಗೆ ವಲಸೆ ಹೋದ ಪಾದ್ರಿಗಳಂತೆ ಸಂಶೋಧಕ ತನ್ನ ಕ್ಷೇತ್ರಕ್ಕೆ ಪ್ರವೇಶಿಸಿ ಅಲ್ಲಿಯೇ ನೆಲಸಿ, ಆ ಜನರ ಆಚಾರವಿಚಾರಗಳನ್ನು ಕಣ್ಣಾರಕಂಡು ಪರೀಕ್ಷಿಸಿ ಮಾಹಿತಿ ಸಂಗ್ರಹಿಸುವುದು ಬಹು ಉತ್ತಮವಾದ ಕ್ರಮ. ಆದಿವಾಸಿಗಳ ಮಾತು ಬಂದಾಗಲಂತೂ ಇದು ತೀರ ಅಗತ್ಯ. ಲಿವಿಂಗ್ಸ್‍ಟನ್ ಆಫ್ರಿಕನರ ನಡುವೆ ಸೇರಿ ಹೋಗಿ ಅವರ ಹಿತೈಷಿಯಾಗಿದ್ದು ಅವರ ನಡುವೇ ಸತ್ತನಲ್ಲವೆ? ವೆರಿಯರ್ ಎಲ್ವಿನ್ ಭಾರತದ ಅನೇಕ ಆದಿವಾಸಿ ತಾಂಡ್ಯಗಳ ನಡುವೆ ಇದ್ದು ಅಮೂಲ್ಯವಾದ ಅನೇಕ ಸಂಶೋಧನೆಗಳನ್ನು ಮಾಡಿದುದು ಇತಿಹಾಸ ಪ್ರಸಿದ್ಧವಾಗಿದೆ. (ನೋಡಿ- ಎಲ್ವಿನ್,-ವೆರಿಯರ್). ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು, ಪರಿಕರ, ಪರಿಜನರೊಂದಿಗೆ ಕ್ಷೇತ್ರದಲ್ಲಿ ಧುಮುಕುವುದು ಇಂದಿಗೂ ಅತ್ಯುತ್ತಮ ಮಾರ್ಗ.
ಇದಲ್ಲದೆ, ಆಯ್ದ ಜನರನ್ನು ಸಂದರ್ಶಿಸಿ ಮಾಹಿತಿ ಪಡೆಯುವುದು, ಅಂಚೆಯ ಮೂಲಕ ಮಾಹಿತಿ ತರಿಸಿಕೊಳ್ಳುವುದು, ಮಾದರಿಗಾಗಿ ಕೆಲವೇ ವಿಷಯಗಳನ್ನು ಪರಿಶೀಲಿಸುವುದು-ಮುಂತಾದ ಕ್ಷೇತ್ರಕಾರ್ಯ ವಿಧಾನಗಳೂ ಬಳಕೆಯಲ್ಲಿವೆ. ಆಲ್‍ಫ್ರೆಡ್ ಚಾರಲ್ಸ್ ಕಿನ್ಸೆ (1894-1956) ಎಂಬ ಅಮೆರಿಕದ ಪ್ರಾಣಿಶಾಸ್ತ್ರಜ್ಞ ಮಾನವನ ಲೈಂಗಿಕ ಜೀವನದ ಬಗ್ಗೆ ನಡೆಸಿರುವ ಸಂಶೋಧನೆಗಳನ್ನು ಇಲ್ಲಿ ನೆನೆಯಬಹುದು. 18,500 ಜನರನ್ನು ವೈಯಕ್ತಿಕವಾಗಿ ಭೇಟಿಮಾಡಿ ಈತ ವಿಷಯಗಳನ್ನು ಸಂಗ್ರಹಿಸಿ ಸೆಕ್ಷುಯಲ್ ಬಿಹೇವಿಯರ್ ಇನ್ ದಿ ಹ್ಯೂಮನ್ ಮೇಲೆ (1948) ಮತ್ತು ಸೆಕ್ಷುಯಲ್ ಬಿಹೇವಿಯರ್ ಇನ್ ದಿ ಹ್ಯೂಮನ್ ಫೀಮೇಲ್ (1953) ಎಂಬೆರಡು ಗ್ರಂಥಗಳನ್ನು ಬರೆದಿದ್ದಾನೆ. ಎಷ್ಟು ಜಾಣ್ಮೆಯಿಂದ, ಅದೆಷ್ಟು ಸೂಕ್ಷ್ಮವಾಗಿ ವಿಷಯ ಸಂಗ್ರಹಣೆ ಮಾಡಿದ್ದರೂ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಬಹು ತೊಂದರೆಯಾಯಿತೆಂದೂ ಮಾನವನ ಲೈಂಗಿಕ ಜೀವನದಲ್ಲಿ ಖಚಿತವಾದ ವೈವಿಧ್ಯ ಇನ್ನೂ ಕಂಡುಬರುತ್ತದೆಂದೂ ಆತ ಹೇಳಿದ್ದಾನೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಕ್ಷೇತ್ರಕಾರ್ಯ ನಡೆಸುವುದು ಎಷ್ಟು ಕಠಿಣವಾದ ಕೆಲಸ ಎಂಬುದು ಇದರಿಂದ ಗೊತ್ತಾಗುತ್ತದೆ. ಅಮೆರಿಕದ ಆದಿವಾಸಿ ಜನಾಂಗಗಳ ಬಗ್ಗೆ ಬಹುಮುಖ ಸಂಶೋಧನೆಗಳನ್ನು ನಡೆಸಿದ ಕ್ರೋಬರ್ ಕ್ಷೇತ್ರಕಾರ್ಯ ಮಾಡಬೇಕೆನ್ನುವವರಿಗೆ ಹಿರಿಯ ಮಾದರಿಯಾಗಿದ್ದಾನೆ. ಆತ ಬಳಸಿದ ಅನೇಕ ವಿಧಾನಗಳು ಇಂದಿಗೂ ಬಳಕೆಯಲ್ಲಿವೆ. 				(ನೋಡಿ- ಕ್ರೋಬರ್,-ಆಲ್‍ಫ್ರೆಡ್-ಲೂಯಿಸ್)

ಒಂದೇ ವಿಷಯದ ಪರಿಶೀಲನೆಯಲ್ಲಿ ಒಂದಕ್ಕಿಂತ ಹೆಚ್ಚಿನ ವಿಧಾನಗಳನ್ನು ಬಳಸಿಕೊಳ್ಳುವುದು ಉತ್ತಮ. ಹಾಗೆ ಮಾಡಿದಲ್ಲಿ ನಾವು ಕೈಗೊಳ್ಳುವ ನಿರ್ಧಾರಗಳು ಹೆಚ್ಚು ಖಚಿತವೂ ನಿರ್ದುಷ್ಟವೂ ಆಗುತ್ತವೆ.		 (ಕೆ.ಎನ್.ವಿ.)